Monday, October 26, 2020


 

ಶಾರ್ವರಿ ಸಂವತ್ಸರದ ಯುಗಾದಿಯಂದು ಆರಂಭಿಸಿದ ರಾಮಾಯಣ ಕಾವ್ಯದ ಪಾರಾಯಣ ವಿಜಯದಶಮಿಯ ಶುಭದಿವಸದಂದು ಶ್ರೀರಾಮಪಟ್ಟಾಭಿಷೇಕ ಸರ್ಗ ಪಾರಾಯಣೆಯೊಂದಿಗೆ ಮುಗಿಸಿದೆ. ಈ ವಿಜಯದಶಮಿ ೨೬ ಅಕ್ಟೋಬರ್  ಇಂಗ್ಲಿಷ್ ತೇದಿಯ ಪ್ರಕಾರ ನನ್ನ ಜನ್ಮದಿವಸವು ಹೌದು, ಇಂದೇ ರಾಮಾಯಣ ಪಾರಾಯಣ ಸಂಪನ್ನನಗೊಂಡಿದ್ದು ನನ್ನ ಸುಕೃತ.  


ಹಿಂದೆ ಹಲವು ಬಾರಿ ಪಾರಾಯಣ ಕ್ರಮದಲ್ಲಿ ಸುಂದರಕಾಂಡದಿಂದ ಶುರು ಮಾಡಬೇಕು ಎಂದು ಪ್ರಯತ್ನಿಸಿದ್ದೆ ಆದರೆ ಕೆಲವು ಬಾರಿ ಹನುಮಂತ ಸಾಗರ ಹಾರಿದ, ಇನ್ನಷ್ಟು ಪ್ರಯತ್ನಗಳಲ್ಲಿ ಸಾಗರ ಹಾರಿದನೇ ಹೊರತು ಲಂಕೆಗೆ ಇಳಿದಿರಲಿಲ್ಲ ☺️☺️

ಈ ಬಾರಿ ಯಾವುದೇ ಸಂಕಲ್ಪವಿಲ್ಲದೆ ಯುಗಾದಿಯ  ದಿವಸ ಬಾಲಕಾಂಡದಿಂದಲೇ ಶುರು ಮಾಡಿದೆ, WFH ದೊರಕ್ಕಿದ್ದರಿಂದ ದೊರೆತ ಅವಕಾಶವನ್ನು ಉಪಯೋಗಿಸಿಕೊಂಡೆ. ಅಂದಿನಿಂದ ದಿನಕ್ಕೆ 2 -3 ಸರ್ಗ ಕೆಲವೊಮ್ಮೆ 7- 8 ಸರ್ಗವು ಸಾಗುತ್ತಿತ್ತು. ಸುಂದರಕಾಂಡ ಮುಗಿಸಿದ ದಿನವೇ ಅಯೋದ್ಯೆಯ ರಾಮಜನ್ಮ ಭೂಮಿ ಜಾಗದಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿತು, ಯುದ್ಧಕಾಂಡ ಶುರು ಮಾಡಿದಾಗ ಮನೆಯಲ್ಲಿಕೆಲವು ಅನಾನುಕೂಲಗಳು ಸಂಭವಿಸಿದವು, ಯುದ್ಧ ಶುರು ಮಾಡುವ ಮುಂಚೆ ಒಮ್ಮೆ ದೇವತನಕ್ಕೆ ಹೋಗಿ ರಾಮನಿಗೆ ಜಯವಾಗಲಿ ಎಂದು ಬೇಡಿದ್ದು ಆಯಿತು.. ಹೀಗೆ ಇದು ಸಾಗಿ ದೈವವಶಾತ್ ವಿಜಯದಶಮಿಗೆ ಪಟ್ಟಾಭಿಷೇಕದ ಯೋಗ ಒದಗಿಬಂದಿದೆ.


ವಾಲ್ಮೀಕಿ ಮುನಿಗಳ ಈ ಕಾವ್ಯವು ಆದಿಕಾವ್ಯವೆಂದೇ ಜನಜನಿತವಾಗಿದೆ. ಇಷ್ಟು ಸಾವಿರಾರು ವರುಷಗಳು ಕಳೆದರು ಇದರ ಕಥಾನಕ, ವ್ಯಕ್ತಿತ್ವ ನಡವಳಿಕೆಗಳು ನಮ್ಮ ನಡುವೆ ಜನಜನಿತವಾಗಿದೆ, ಅದಕ್ಕೆ ಕಾರಣ ಇಲ್ಲಿನ ಮಾನುಷ ಚಿತ್ರಣ. ಧರ್ಮವೇ ಮೂರ್ತಿವೆತ್ತಂತಿರುವ ರಾಮ, ತನ್ನ ಆತ್ಮಗುಣದಿಂದ ಔನ್ನತ್ಯ ಸಾದಿಸುವ ಸೀತೆ, ತನ್ನ ಪ್ರಾಣವೇ ರಾಮ ಎಂದು ಬ್ರಾತೃಪ್ರೇಮಕ್ಕೆ ಇಂದಿಗೂ ನಿದರ್ಶನನಾಗಿ ನಿಲ್ಲುವ ಲಕ್ಷ್ಮಣ, ಸ್ನೇಹಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಡುವ ಸುಗ್ರೀವ, ಸ್ವಾಮಿ ಕಾರ್ಯವನ್ನು ನಿಸ್ವಾರ್ಥದಿಂದ ಎದೆಗುಂದದೆ ನಡೆಸಿಕೊಡುವ ಹನುಮಂತ, ರಾವಣನ ಅಧರ್ಮವನ್ನು ದಿಕ್ಕರಿಸಿ ಧರ್ಮಕ್ಕೆ ಶರಣಾಗುವ ವಿಭೀಷಣ, ರಾಮನೊಡನೆ ಯುದ್ಧ ತಪ್ಪು ಎಂದು ಗೊತ್ತಿದ್ದರೂ ಅಣ್ಣನ ಋಣಕ್ಕಾಗಿ ಯುದ್ಧ ಮಾಡುವ ಕುಂಭಕರ್ಣ, ವಿದ್ವಾಂಸನಾದರೂ ಅಧರ್ಮದಿಂದಲೇ ತನ್ನ ಅಧಃ ಪತನ ಹೊಂದುವ ರಾವಣ,  ರಾಮನಂತೆ ತಾನು ನಾರುಮುಡಿಯುಟ್ಟು ಅರಮನೆಯ ರಾಜ್ಯಭಾರದ ವ್ಯಸನಕ್ಕೆ ಒಳಗಾಗದೆ ನಂದಿಗ್ರಾಮದಲ್ಲೇ ಅಣ್ಣನ ಬರುವಿಕೆಯನ್ನು ಕಾಯುವ ಭರತ....ಮನುಷ್ಯರೆನಿಸಿಕೊಂಡವರು ಅನ್ಯಾಯ, ಅಧರ್ಮವೇ ಮಾಡುತ್ತಿರುವಾಗ ಸಹಾಯ ಮಾಡುವ ಕಪಿಸೇನೆ..ಹೀಗೆ ಹತ್ತು ಹಲವು ವ್ಯಕ್ತಿತ್ವಗಳ ಈ ಕೃತಿಯಲ್ಲಿ ನಮಗೆ ದೊರೆಯುತ್ತದೆ - ಇದನ್ನು ಪ್ರತಿಯೊಬ್ಬರೂ ಓದಿ ಅನುಭವಿಸಿಯೇ ನಾವು ತಿಳಿಯಬೇಕು.


ಅಬಾಲವೃದ್ಧರಾಗಿ ಇಂದಿಗೂ ನಮ್ಮಲ್ಲಿ ರಾಮಾಯಣದ ರಸಾಸ್ವಾದ ನಡೆಯುತ್ತಿರುತ್ತದೆ. ಮಕ್ಕಳಿಗೆ ಕಥೆಯಲ್ಲಿನ ಸ್ವಾರಸ್ಯವಾದರೆ, ಹಿರಿಯರಿಗೆ ಒಂದು ವ್ರತವಾಗಿ, ಸಿದ್ಧಿಯಾಗಿ, ಕಾವ್ಯವಾಗಿ ನಮ್ಮ ಜನ ಇದನ್ನು ತಮ್ಮ ಮನೆ ಮನಗಳಲ್ಲಿ ತುಂಬಿಕೊಂಡಿದ್ದರೆ.  ನಾವು ಕಥೆ ಕೇಳಿದ್ದೇವೆ, ಚಿತ್ರ ನೋಡಿದ್ದೇವೆ ಎನ್ನಬಹುದು ಆದರೆ ಓದುವಾಗ ನಮ್ಮಲ್ಲಿ ದೊರೆಯುವ ಅನುಭೂತಿ ನಮ್ಮನ್ನು ಸಹೃದಯರನ್ನಾಗಿ ಮಾಡಿಸುತ್ತದೆ. ಒಂದೊಂದು ಪಾತ್ರವು ಒಂದೊಂದು ಸಂಧರ್ಭದಲ್ಲಿ ಮಾಡಿಸುವ ರಸಾಸ್ವಾದವು ಬಣ್ಣನೆಗೆಟುಕದ್ದು. ಗಹನವಾದ ತತ್ತ್ವವೊಂದನ್ನು ಜನಸಾಮಾನ್ಯರಿಗೆ ಗ್ರಾಹ್ಯವಾಗುವಂತೆ ತೋರಿಸಿಕೊಟ್ಟಿರುವ ವಾಲ್ಮೀಕಿಗಳ ಕಥಾಶಕ್ತಿ ಸಾಮಾನ್ಯವೆಂಬಂತೆ ಪ್ರವಹಿಸಿದೆ. ಈ ಕಥಾನಕ ಸೃಷ್ಟಿಯಲ್ಲಿ ವಾಲ್ಮೀಕಿಗಳಂತೂ ಕಾವ್ಯೆತಿಹಾಸದ ಪ್ರಕಟಣೆ ಓತಪ್ರೋತವಾಗಿ ನಡೆಯುತ್ತದೆ. ಇನ್ನು ಕನ್ನಡಲ್ಲಿ ಇದನ್ನು ಅನುವಾದಾಮಾಡಿರುವ ರಂಗನಾಥಶರ್ಮರು ಇದನ್ನು ಒಂದು ಸ್ವತಂತ್ರಕೃತಿಯಂತೆ ನಿರೂಪಿಸಿದ್ದಾರೆ. 


ಪ್ರತಿಕಾಂಡದ ಕೆಲವು ಸ್ವಾರಸ್ಯ ವಿಶೇಷಗಳನ್ನು ವಿಶದವಾಗಿ  ತಿಳಿಯಬೇಕೆನಿಸದರು, ನನ್ನ ಕಾರ್ಯಬಾಹುಳ್ಯದಿಂದ ಇದನ್ನು ಸದ್ಯಕ್ಕೆ ಮಾಡಲಾಗುತ್ತಿಲ್ಲ ಇದನ್ನು ನಾನು ಮತ್ತೊಮ್ಮೆ ವಿವರವಾಗಿ ಶೀಘ್ರದಲ್ಲಿ ಬರೆಯುತ್ತೇನೆ. 




2 comments:

Sudhakar Jois said...

Congratulations Naveen... Your experience is an inspiration for me to start... Namaste

Shreesha Karantha said...

Congratulations naveena