Thursday, November 28, 2019

ಮೈಸೂರಿನ ನಿಧಿ ಶ್ರೀತತ್ತ್ವನಿಧಿ


ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ. 




Tuesday, May 21, 2019

ಮಾಡೇಶ್ವರ ಎಂಬ ಊರಿನ ಕಥೆ



"ಈ ಊರಿನಲ್ಲಿರುವುದು ಎರಡು ಕುಟುಂಬದ ೪ ಮನೆಗಳು ಮಾತ್ರ, ಗ್ರಾಮ ಬೆಟ್ಟದ  ಬುಡದಲ್ಲಿ ಇರುವುದರಿಂದ ಪ್ರಾಣಿ, ಸರೀಸೃಪಗಳ ತೊಂದರೆ, ಸಾರ್ವಜನಿಕ ಸಾರಿಗೆಗೆ ಸುಮಾರು ೨-೩ ಕಿ.ಮೀ. ನಡೆಯಬೇಕಾಗಿರುವುದರಿಂದ ಸ್ವಂತ ವಾಹನ ಸೌಕರ್ಯವಿದ್ದವರು ಮಾತ್ರ ಇಲ್ಲಿಗೆ ಬರಬಹುದು, ಹತ್ತಿರದ ಅಂಗಡಿಯಂದರೆ ೩ ಕಿ.ಮೀ. ದೂರದ್ದು, ಮನೆಯಲ್ಲೇ ಮೊಬೈಲ್ ನೆಟವರ್ಕ್ ದೊರೆಯುವುದಿಲ್ಲವಾದಾರಿಂದ ಕೈಯಲ್ಲಿ ಮೊಬೈಲ್ ಹಿಡಿದು ನೆಟವರ್ಕ್ಗಾಗಿ  ಅಲೆಯ ಬೇಕಾದ  ಪರಿಸ್ಥಿತಿ , ವಿದ್ಯುತ್ ಸಂಪರ್ಕ ಕಡಿತಗೊಂಡರೆ ಒಮ್ಮೊಮ್ಮೆ ೪-೫ ದಿವಸಗಳವರೆಗೂ ಕತ್ತಲೆಯ ಆವಾಸ, ಮಳೆಗಾಲದಲ್ಲಿ ಪರಿಸ್ಥಿತಿಯನ್ನಂತೂ ಹೇಳತೀರದು ... " ಇವೆಲ್ಲವೂ ನಿಮಗೆ ಮಲೆನಾಡಿನ ಯಾವುದೋ ಊರಿನ ಚಿತ್ರಣವನ್ನು ನಿಮ್ಮ ಕಣ್ಣ ಮುಂದೆ ತಂದಿದ್ದರೆ ನಿಮ್ಮ ಊಹೆ ತಪ್ಪು, ಇದು ಬೆಂಗಳೂರಿನ ಸನಿಹದಲ್ಲೇ ಇರುವ ಮಾಡೇಶ್ವರ ಎಂಬ ಗ್ರಾಮದ ಪರಿಸ್ಥಿತಿ. 

ಬೆಂಗಳೂರಿನಿಂದ ಕೇವಲ ೬೦ ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿದೆ, ಇಲ್ಲಿ ವ್ಯಾಸರಾಜರು ಪ್ರತಿಷ್ಠಾಪಿಸಿದರು ಎನ್ನಲಾದ ಆಂಜನೇಯ, ಚೋಳರ ಕಾಲದ ಮುಕ್ಕಣ್ಣ, ಬಸವಣ್ಣ ದೇವಸ್ಥಾನ,  ಬೃಂದಾವನ ನರಸಿಂಹ, ಗ್ರಾಮ ದೇವತೆ ವೀರಮಾಸ್ತಮ್ಮ ದೇವಸ್ಥಾನಗಳಿವೆ.  ಶ್ರಾವಣ, ಮಾಘ ಮಾಸಗಳಲ್ಲಿ ಇಲ್ಲಿ ನಡೆಯುವ ವಿಶೇಷ ಭಜನೆಗೆ ೯೦ ವರುಷಕ್ಕೂ ಮಿಗಿಲಾದ ಇತಿಹಾಸವಿದೆ. ಕೆರೆ ಕಟ್ಟೆಗಳಿವೆ, ಸಿಹಿ ನೀರಿನ ಬಾವಿ ಇದೆ, ಕಚ್ಚಾ ರಸ್ತೆಯಿದೆ,ಪುರಾತನ ಕೋಟೆಗಳ ಅವಶೇಷವಿದೇ, ಆದರೆ ಇದೆಲ್ಲವೂ ಇದ್ದರು ಶತಮಾನಗಳಿಂದ ನೆಲೆಸಿದ್ದ ಊರನ್ನು ಗ್ರಾಮಸ್ಥರು ತೊರೆಯುತ್ತಿದ್ದಾರೆ ... ಹೀಗೇಕೆ ? ಎಂದೆನಿಸದರೆ ಇದೊಂದು ಸರ್ಕಾರಿ ಪ್ರಾಯೋಜಿತ ವಲಸೆ ಎನ್ನುತ್ತಾರೆ ಗ್ರಾಮಸ್ಥರು.
ಹತ್ತು ಹದಿನೈದು ವರುಷಗಳ ಕೆಳಗೆ ಈ ಊರಿನಲ್ಲಿ ಸುಮಾರು ೩೦-೩೫ ಮನೆಗಳಿದ್ದವು, ಕೃಷಿಯನ್ನೇ ಅವಲಂಬಿಸಿದ್ದ ಕುಟುಂಬಗಳು ಮನೆಗಳು ಸದಾ ಜನರಿಂದ ಚಟುವಟಿಕೆಗಳಿಂದಿದ್ದವು, ಹೊಲ ಗದ್ದೆ, ಕಣ, ಪಶುಸಂಗೋಪನೆಗಳಿಂದ ಊರು ಸದಾ ಗಿಜಿಗುಡುತ್ತಿದ್ದವು. ಕೆರೆ, ಕಟ್ಟೆ, ಬಾವಿಗಳ ಬಳಿ, ಹೂವಿನ ಗಿಡಗಳ ಬಳಿ ಹೆಣ್ಣು ಮಕ್ಕಳ ಸಾಂಸಾರಿಕ ಕಥೆಗಳು ಕೇಳಿಬರುತ್ತಿದ್ದವು, ಬೆಟ್ಟದಲ್ಲಿ ಕುರಿ , ಮೇಕೆ ಹಸುಗಳನ್ನು ಮೇಯಿಸಲು ಒಗ್ಗಟ್ಟಾಗಿ ಹೋಗುವ ಹತ್ತು ಹಲವು ಜನರಿದ್ದರು. ವ್ಯಾಪಾರ ವ್ಯವಹಾರಗಳಿಗೆ ಹಲವು ಜನರ ಓಡಾಟವಿತ್ತು,  ಪೂಜೆ ಹಬ್ಬ ಉತ್ಸವಗಳ ಆಡಂಬರಗಳಿದ್ದವು. ಸಾಮಾನ್ಯ ಹಳ್ಳಿಗಳಂತೆ ಜನರ ಒಡನಾಟ ಒಗ್ಗಟ್ಟಿನಿಂದ ಊರು ಒಂದು ರೀತಿ ಕಂಗೊಳುಸಿತ್ತಿತ್ತು. 


ಆದರೆ, ಆಧುನಿಕತೆಗೆ ತೆರೆದುಕೊಳ್ಳುತ್ತಲೇ  ಗ್ರಾಮಸ್ಥರಿಗೆ ಒಂದು ಕೃತಕ ಕೊರತೆ ಇದ್ದಕ್ಕಿದ್ದಹಾಗೆ ಆವರಿಸಿತು. ಬೆಟ್ಟದ ಬುಡದಲ್ಲೆ ಕಳೆಯುತ್ತಿರುವ ತಮ್ಮ ಜೀವನವನ್ನು ತುಚ್ಛವಾಗಿ ತಮಗೆ ತಾವೇ ಕಂಡುಕೊಂಡರು. ಬೆಟ್ಟದ ಬುಡದಲ್ಲೇ ಇದ್ದರೆ ತಮ್ಮ ಮಕ್ಕಳನ್ನು ಮದುವೆಯಾಗಲು ಯಾರು ಮುಂದೆಬರುವುದಿಲ್ಲ ಎಂದೆನಿಸಿತು. ರಸ್ತೆಯಿಂದ ಬಹಳ ಒಳಗೆ ಈ ಊರು ಇರುವುದರಿಂದ ಕಚ್ಚಾ ರಸ್ತೆಯುಳ್ಳ  ತಮ್ಮ ಊರಿಗೆ ಯಾರು ಬರಲೊಲ್ಲರು ಎಂದುಕೊಂಡರು. ಈ ನಡುವೆ ಯಾರೋ ಒಬ್ಬರು ಸರ್ಕಾರಕ್ಕೆ ಅರ್ಜಿ ಬರೆದಿದ್ದರಿಂದ ಊರಿನಿಂದ ಸುಮಾರು ೧.೫ ಕಿ.ಮೀ ದೂರದಲ್ಲಿ ರಸ್ತೆ ಪಕ್ಕದ  ಸರ್ಕಾರಿ ಜಮೀನು  ವಸತಿಗಾಗಿ ಪರಿವರ್ತನೆ ಹೊಂದಿತು, ಮನೆ ಕಟ್ಟಲು ಸರ್ಕಾರವೇ  ಹಣ ಮಂಜೂರು ಮಾಡಿತು  ಹೀಗೆ ಸರ್ಕಾರವೇ ಈ ವಲಸೆಯನ್ನು ಪ್ರಾಯೋಜಿಸಿದ್ದರಿಂದ ಒಬ್ಬೊಬ್ಬರೇ ಊರನ್ನು ಬಿಡಲು ಶುರು ಮಾಡಿದರು. ಅಕಾರಣವಾಗಿ ಮೂಲ ಮಾಡೇಶ್ವರ  ತನ್ನ ಛಾಪನ್ನು ಕಳೆದುಕೊಂಡಿತು, ಕ್ರಮೇಣ ಮೂಲ ಮಾಡೇಶ್ವರ ಹಿಂದುಳಿದು ದೂರದಲ್ಲೆಲೋ ಹೊಸ ಗ್ರಾಮ ನೆಲೆಯೂರಿತು. 


ಬೆಟ್ಟದ ಬುಡದಲ್ಲಿನ ಗ್ರಾಮದಲ್ಲಿ ಯಾವುದೇ "ಆಧುನಿಕ" ಮೂಲಭೂತ ಸೌಲಭ್ಯ ಕೆಲಸಗಳು ಮುಂದುವರೆಯದ್ದಿದರಿಂದ, ಇಡೀ ಗ್ರಾಮದಲ್ಲಿ ಈಗ ಕೇವಲ ೨ ಮನೆಯ ೮-೧೦ ಜನ ಮಾತ್ರ ನೆಲಿಸಿದ್ದಾರೆ. ಕೃಷಿ ಚಟುವಟಿಕೆ ಮಾಡುವ ಜನರೇ ಕಾಣೆಯಾಗಿದ್ದಾರೆ,  ಕಚ್ಚಾ ರಸ್ತೆ ೧೦ ವರುಷದ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ , ನಿರಂತರ ಜ್ಯೋತಿಯ ಕಂಬಗಳು ಊರಿಗೆ ಬೆಳಕು ತಂದಿಲ್ಲ, ನೀರಿನ ಕೊಳಾಯಿಗಳಿದ್ದರು ಯಾರು ನಿಗಾವಹಿಸುವರಿಲ್ಲ, ಅಂಗನವಾಡಿ, ಹಾಲಿನ ಡೈರಿ ಎಂದೋ ವಲಸೆ ಹೋಗಿಯಾಗಿದೆ, ಬೆರೆಳಿಣಿಕೆಯ ಜನರಿರುವ ಕಾರಣ ಗ್ರಾಮಕ್ಕೆ ಜನಪ್ರತಿನಿದಿಗಳು ಬರುವ ಗೋಜಿಗೆ ಹೋಗಿಲ್ಲ. 


















ಹೀಗೆ ಕೇವಲ ೧೦-೧೫ ವರುಷಗಳಿಂದ ಈಚೆ ಇಡೀ ಗ್ರಾಮವೇ ಖಾಲಿಯಾಗಿದೆ. ಇರುವ ೨ ಕುಟುಂಬಗಳು  ಹಲವು ಕೊರತೆಗಳ ನಡುವೆಯೂ ಬದುಕನ್ನು ಸಾಗಿಸುತ್ತಿದ್ದಾರೆ.  ಇಲ್ಲಿನ ಬೆಟ್ಟದ, ದೇವಸ್ಥಾನಗಳ ಜೊತೆಗಿರುವ ತಮ್ಮ ಅವಿನಾಭಾವ ಸಂಬಂಧವನ್ನು ತೊರೆಯಲಾರದೆ, ಹೊಸ ಗ್ರಾಮಕ್ಕೆ ವಲಸೆ ಹೋಗಲಾರದೆ ಡೋಲಾಯಮಾನ ಸ್ಥಿತಿಯ್ಲಲಿ ದಿಕ್ಕುತೋಚದಂತಾಗಿದ್ದರೆ. "ಅಭಿವೃದ್ಧಿಯ ಸಂಕೇತವೆನಿಸಿರುವ" ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೩೫ ಕಿ.ಮೀ ದೂರದಲ್ಲಿದ್ದರು,  ಇಲ್ಲಿನ ಜನರ ಬವಣೆ ಆಧುನಿಕ ಜಗತ್ತನ್ನು ನಾಚಿಸುವಂತಿದೆ.