Friday, December 30, 2011

ಹೊಸ ವರ್ಷಕ್ಕೆ ಕಗ್ಗದ ಬೆಳಕು...

ಕಗ್ಗ ಎಲ್ಲ ಕಾಲಕ್ಕೂ ಸಲ್ಲುವ ಒಂದು ಗ್ರಂಥ, ನವ ವರುಷಕೆ ಕೆಲವು ಆಯ್ದ ಕಗ್ಗಗಳು ಇಲ್ಲಿವೆ..

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು |
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ||
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |
ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ ||

ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |
ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |
ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||


ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ |
ಭೀಮಸಾಹಸವಿರಲಿ ಹಗೆತನವನುಳಿದು ||
ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು |
ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ ||

ಗೌರವಿಸು ಜೀವನವ, ಗೌರವಿಸು ಚೇತನವ |
ಆರದೋ ಜಗವೆಂದು ಭೇದವೆಣಿಸದಿರು ||
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ |
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ||
ವಿವರಗಳ ಜೋಡಿಸುವ ಯಜಮಾನ ಬೇರಿಹನು |
ಸವೆಸು ನೀಂ ಜನುಮವನು - ಮಂಕುತಿಮ್ಮ ||