Friday, March 17, 2017




 

ಮಾರ್ಚ್ ೧೭ ಕನ್ನಡ ಸಾಹಿತ್ಯದ ದಿಗ್ಗಜರಾದ ಡಿ.ವಿ.ಜಿ. ಹಾಗು ಪು. ತಿ. ನ ರವರ ಜನ್ಮದಿನ.
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ ರಂದು ಜನಿಸಿದರು, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಜನಿಸಿದ್ದು ಮಾರ್ಚ್ 17 ೧೮೮೭ ಮುಳಬಾಗಿಲಿನಲ್ಲಿ. ಆಧ್ಯಾತ್ಮ, ಲೋಕ ನೀತಿ, ಪ್ರಕೃತಿ, ದೈವತ್ವ ಒಳಗೊಂಡಂತಹ ಸಮಾಹಿತದ ಸಾಹಿತ್ಯ ಈರ್ವರ ಸಾಹಿತ್ಯದ ಪ್ರಧಾನ ಅಂಗ. 

ಪದ್ಮ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಇಬ್ಬರೂ ಬರೆದಂತೆ ಬದುಕಿ ಬದುಕಿದಂತೆ ಬರೆದವರು.

ಪು.ತಿ.ನ ರವರು "ಕರ್ಮಯೋಗಿ ಡಿ.ವಿ.ಜಿ." ಎಂದು ಡಿವಿಜಿಯವರನ್ನು ಸ್ಮರಿಸಿರುವ ಪದ್ಯ.

"ಆತ್ಮದಿಂದಾತ್ಮವನು ಮೇಲಕೆತ್ತಲು ಬೇಕು
ಆತ್ಮವನು ಕೆಳಗೊತ್ತಿ ಇಡಲಾಗದು 
ಆತ್ಮವೇ ಆತ್ಮಕ್ಕೆ ನಂಟನಂತೊದಗುವುದು
ಆತ್ಮವೇ ಆತ್ಮಕ್ಕೆ ಹಗೆಯಪ್ಪುದು 

"ಯಾರು ತನ್ನನು ತಾನು ಗೆಲ್ಲುವನೋ ಆತನಿಗೆ 
ತೀರಾ ಹತ್ತಿರದ ಬಂಧುವಪ್ಪುದಾತ್ಮ 
ಯಾರು ತನ್ನೊಳಗಾತ್ಮನಿಲ್ಲದೊಲು ಬಾಳುವನೊ 
ವೈರಿಯಾತನಿಗಾತ್ಮ ತಾನಪ್ಪುದು -"

ಅಂದು ಗೀತಾಚಾರ್ಯರಿಂತೊರೆದ ಸೂಕ್ತಿಯನು 
ಇಂದು ಬಾಳೊಳು ತಂದ ಧೀರಾತ್ಮನಿವನು 
ತನ್ನಿಂದ ತಾನಿದ್ದು ತನ್ನ ಗೆದ್ದವನೀತ 
ಉನ್ನತರೋಳುನ್ನುತವನು ಪ್ರೇಮ ನಿಷ್ಠಪ್ತ 
ದೈವವನು ನಂಬಿಯೂ ಪುರುಷಪ್ರಯತ್ನವನು 
ಸೇವೆ ಎಂದೆಣಿಸಿದವ ಸತ್ಕರ್ಮಾಸಕ್ತ 

ನಕ್ಕು ನಲಿಸುವ ಸರಸಿ ಬಿಕ್ಕಿ ಮರುಗುವ ಕರುಣಿ 
ಸೊಕ್ಕಿದವರನು ತಾನು ಧಿಕ್ಕರಿಪ ಧೃತಿಮಾನ್ 
ದುಕ್ಕ ಸೊಗಗಳು ದೈವವಿಕ್ಕುವ ಹಸಾದವೆನೆ 
ದಿಕ್ಕುಗೆಡದಂದದಲಿ ತಾಳಿದ ಸಹಿಷ್ಣು 

ಕಣ್ಣೀತ ಕಿರಿಯರಿಗೆ ಹಣ್ಣು ತಾತ್ವಿಕ ಜನಕ್ಕೆ 
ತಿಣ್ಗ ಬುದ್ದಿಯ ಕುಶಲ ಹೃದಯಜೀವಿ 
ಮಣ್ಣುವಿಣ್ ಒಟ್ಟಾಗಿ ಸೃಜಿಸೀತೆ ಡಿವಿಜಿಯ 
ಕನ್ನಡವು ಸಾರಮತಿಯೀತನಿಂದೆಂಬೆ 

ನಾಡು ನುಡಿ ರೂಢಿಗಳ ತ್ರೈಮೌಲ್ಯಕಳವಡಿಸಿ 
ಹೊಸ ನೋಟ ತಂದನೀತ 
ಹಾಡು ನುತಿನತಿಗಳಿಂದರ್ಚಿಸುವುದಚ್ಚರಿಯೆ 
ಈತನಂ ಪ್ರೀತ ಜನ ಜಾತ 


Thursday, March 16, 2017

                                                                 

                                                                  ಚಿತ್ರದ ಪರಿಚಯ

ಸಾಮಾನ್ಯವಾಗಿ ಈ ಚಿತ್ರವನ್ನು ಕನ್ನಡ ಸಾಹಿತ್ಯರಸಿಕರೆಲ್ಲ ಕಂಡಿಹರು, ಇದು "ಆಲ್ ಇಂಡಿಯಾ ರೇಡಿಯೋ" ಮೈಸೂರ್ ಕೇಂದ್ರದ ಅಧಿಕಾರಿಗಳು ತಾ|| ೧೫-೮-೧೯೫೪ರ ಸಂಜೆ ಸ್ವಾತಂತ್ರ್ಯೋತ್ಸವದ ಅಂಗವಾಗಿ "ನವ್ಯ ಸಾಹಿತ್ಯ ನಿರ್ಮಾಣ" ಎಂಬ ಭಾಷಣಮಾಲೆಯನ್ನು ಏರ್ಪಡಿಸಿದ್ದರು.

ಈ ಭಾಷಣಮಾಲೆಯಲ್ಲಿ ಭಾಗವಹಿಸಿದ್ದವರು : ಸರ್ವಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಕುವೆಂಪು, ವಿ.ಸೀತಾರಾಮಯ್ಯ,  ಶಿವರಾಮ ಕಾರಂತ, ಅ. ನ. ಕೃಷ್ಣರಾಯರು ಮತ್ತು ಜೆ. ಪಿ. ರಾಜರತ್ನಂ.

ಇದರಲ್ಲಿ 'ರಾಷ್ಟ್ರಸ್ವಾತಂತ್ರ್ಯ ಮತ್ತು ಕಾವ್ಯಸ್ಪೂರ್ತಿ'ಯನ್ನು ಡಿ.ವಿ.ಜಿ. , 'ಹೊಸ ಸಾಹಿತ್ಯ ರೂಪಗಳು' ಕುರಿತು ಕಾರಂತ, 'ಸಾಹಿತ್ಯ ಮತ್ತು ವಾಸ್ತವಿಕತೆ'ಯನ್ನು ಅ.ನ.ಕೃ, 'ನವ್ಯಸಾಹಿತ್ಯದಲ್ಲಿ ನೀರೋಗ ವಿಮರ್ಶೆ'ಯಾ ಬಗ್ಗೆ ಮಾಸ್ತಿ, 'ಸಾಹಿತ್ಯ ಮತ್ತು ಲೋಕಶಾಂತಿ'ಯನ್ನು ವಿ.ಸೀ, 'ಮುಂದಿನ ಸಾಹಿತ್ಯದಲ್ಲಿ ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ'ಯನ್ನು ಕುರಿತು ಕುವೆಂಪು ಮಾತನಾಡಿದರು. ರಾಜರತ್ನಂ ಈ  ನಿರ್ದೇಶಕರಾಗಿದ್ದರು.

ಮೈಸೂರಿನ  ಕಾವ್ಯಾಲಯ ಪ್ರಕಾಶಕರು ಈ ಭಾಷಣಗಳನ್ನು "ನವ್ಯ ಸಾಹಿತ್ಯ ನಿರ್ಮಾಣ' ಎಂಬ ಹೆಸರಿನಿಂದ ಪ್ರಕಟಿಸಿದ್ದರು.