Monday, October 26, 2020


 

ಶಾರ್ವರಿ ಸಂವತ್ಸರದ ಯುಗಾದಿಯಂದು ಆರಂಭಿಸಿದ ರಾಮಾಯಣ ಕಾವ್ಯದ ಪಾರಾಯಣ ವಿಜಯದಶಮಿಯ ಶುಭದಿವಸದಂದು ಶ್ರೀರಾಮಪಟ್ಟಾಭಿಷೇಕ ಸರ್ಗ ಪಾರಾಯಣೆಯೊಂದಿಗೆ ಮುಗಿಸಿದೆ. ಈ ವಿಜಯದಶಮಿ ೨೬ ಅಕ್ಟೋಬರ್  ಇಂಗ್ಲಿಷ್ ತೇದಿಯ ಪ್ರಕಾರ ನನ್ನ ಜನ್ಮದಿವಸವು ಹೌದು, ಇಂದೇ ರಾಮಾಯಣ ಪಾರಾಯಣ ಸಂಪನ್ನನಗೊಂಡಿದ್ದು ನನ್ನ ಸುಕೃತ.  


ಹಿಂದೆ ಹಲವು ಬಾರಿ ಪಾರಾಯಣ ಕ್ರಮದಲ್ಲಿ ಸುಂದರಕಾಂಡದಿಂದ ಶುರು ಮಾಡಬೇಕು ಎಂದು ಪ್ರಯತ್ನಿಸಿದ್ದೆ ಆದರೆ ಕೆಲವು ಬಾರಿ ಹನುಮಂತ ಸಾಗರ ಹಾರಿದ, ಇನ್ನಷ್ಟು ಪ್ರಯತ್ನಗಳಲ್ಲಿ ಸಾಗರ ಹಾರಿದನೇ ಹೊರತು ಲಂಕೆಗೆ ಇಳಿದಿರಲಿಲ್ಲ ☺️☺️

ಈ ಬಾರಿ ಯಾವುದೇ ಸಂಕಲ್ಪವಿಲ್ಲದೆ ಯುಗಾದಿಯ  ದಿವಸ ಬಾಲಕಾಂಡದಿಂದಲೇ ಶುರು ಮಾಡಿದೆ, WFH ದೊರಕ್ಕಿದ್ದರಿಂದ ದೊರೆತ ಅವಕಾಶವನ್ನು ಉಪಯೋಗಿಸಿಕೊಂಡೆ. ಅಂದಿನಿಂದ ದಿನಕ್ಕೆ 2 -3 ಸರ್ಗ ಕೆಲವೊಮ್ಮೆ 7- 8 ಸರ್ಗವು ಸಾಗುತ್ತಿತ್ತು. ಸುಂದರಕಾಂಡ ಮುಗಿಸಿದ ದಿನವೇ ಅಯೋದ್ಯೆಯ ರಾಮಜನ್ಮ ಭೂಮಿ ಜಾಗದಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿತು, ಯುದ್ಧಕಾಂಡ ಶುರು ಮಾಡಿದಾಗ ಮನೆಯಲ್ಲಿಕೆಲವು ಅನಾನುಕೂಲಗಳು ಸಂಭವಿಸಿದವು, ಯುದ್ಧ ಶುರು ಮಾಡುವ ಮುಂಚೆ ಒಮ್ಮೆ ದೇವತನಕ್ಕೆ ಹೋಗಿ ರಾಮನಿಗೆ ಜಯವಾಗಲಿ ಎಂದು ಬೇಡಿದ್ದು ಆಯಿತು.. ಹೀಗೆ ಇದು ಸಾಗಿ ದೈವವಶಾತ್ ವಿಜಯದಶಮಿಗೆ ಪಟ್ಟಾಭಿಷೇಕದ ಯೋಗ ಒದಗಿಬಂದಿದೆ.


ವಾಲ್ಮೀಕಿ ಮುನಿಗಳ ಈ ಕಾವ್ಯವು ಆದಿಕಾವ್ಯವೆಂದೇ ಜನಜನಿತವಾಗಿದೆ. ಇಷ್ಟು ಸಾವಿರಾರು ವರುಷಗಳು ಕಳೆದರು ಇದರ ಕಥಾನಕ, ವ್ಯಕ್ತಿತ್ವ ನಡವಳಿಕೆಗಳು ನಮ್ಮ ನಡುವೆ ಜನಜನಿತವಾಗಿದೆ, ಅದಕ್ಕೆ ಕಾರಣ ಇಲ್ಲಿನ ಮಾನುಷ ಚಿತ್ರಣ. ಧರ್ಮವೇ ಮೂರ್ತಿವೆತ್ತಂತಿರುವ ರಾಮ, ತನ್ನ ಆತ್ಮಗುಣದಿಂದ ಔನ್ನತ್ಯ ಸಾದಿಸುವ ಸೀತೆ, ತನ್ನ ಪ್ರಾಣವೇ ರಾಮ ಎಂದು ಬ್ರಾತೃಪ್ರೇಮಕ್ಕೆ ಇಂದಿಗೂ ನಿದರ್ಶನನಾಗಿ ನಿಲ್ಲುವ ಲಕ್ಷ್ಮಣ, ಸ್ನೇಹಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಡುವ ಸುಗ್ರೀವ, ಸ್ವಾಮಿ ಕಾರ್ಯವನ್ನು ನಿಸ್ವಾರ್ಥದಿಂದ ಎದೆಗುಂದದೆ ನಡೆಸಿಕೊಡುವ ಹನುಮಂತ, ರಾವಣನ ಅಧರ್ಮವನ್ನು ದಿಕ್ಕರಿಸಿ ಧರ್ಮಕ್ಕೆ ಶರಣಾಗುವ ವಿಭೀಷಣ, ರಾಮನೊಡನೆ ಯುದ್ಧ ತಪ್ಪು ಎಂದು ಗೊತ್ತಿದ್ದರೂ ಅಣ್ಣನ ಋಣಕ್ಕಾಗಿ ಯುದ್ಧ ಮಾಡುವ ಕುಂಭಕರ್ಣ, ವಿದ್ವಾಂಸನಾದರೂ ಅಧರ್ಮದಿಂದಲೇ ತನ್ನ ಅಧಃ ಪತನ ಹೊಂದುವ ರಾವಣ,  ರಾಮನಂತೆ ತಾನು ನಾರುಮುಡಿಯುಟ್ಟು ಅರಮನೆಯ ರಾಜ್ಯಭಾರದ ವ್ಯಸನಕ್ಕೆ ಒಳಗಾಗದೆ ನಂದಿಗ್ರಾಮದಲ್ಲೇ ಅಣ್ಣನ ಬರುವಿಕೆಯನ್ನು ಕಾಯುವ ಭರತ....ಮನುಷ್ಯರೆನಿಸಿಕೊಂಡವರು ಅನ್ಯಾಯ, ಅಧರ್ಮವೇ ಮಾಡುತ್ತಿರುವಾಗ ಸಹಾಯ ಮಾಡುವ ಕಪಿಸೇನೆ..ಹೀಗೆ ಹತ್ತು ಹಲವು ವ್ಯಕ್ತಿತ್ವಗಳ ಈ ಕೃತಿಯಲ್ಲಿ ನಮಗೆ ದೊರೆಯುತ್ತದೆ - ಇದನ್ನು ಪ್ರತಿಯೊಬ್ಬರೂ ಓದಿ ಅನುಭವಿಸಿಯೇ ನಾವು ತಿಳಿಯಬೇಕು.


ಅಬಾಲವೃದ್ಧರಾಗಿ ಇಂದಿಗೂ ನಮ್ಮಲ್ಲಿ ರಾಮಾಯಣದ ರಸಾಸ್ವಾದ ನಡೆಯುತ್ತಿರುತ್ತದೆ. ಮಕ್ಕಳಿಗೆ ಕಥೆಯಲ್ಲಿನ ಸ್ವಾರಸ್ಯವಾದರೆ, ಹಿರಿಯರಿಗೆ ಒಂದು ವ್ರತವಾಗಿ, ಸಿದ್ಧಿಯಾಗಿ, ಕಾವ್ಯವಾಗಿ ನಮ್ಮ ಜನ ಇದನ್ನು ತಮ್ಮ ಮನೆ ಮನಗಳಲ್ಲಿ ತುಂಬಿಕೊಂಡಿದ್ದರೆ.  ನಾವು ಕಥೆ ಕೇಳಿದ್ದೇವೆ, ಚಿತ್ರ ನೋಡಿದ್ದೇವೆ ಎನ್ನಬಹುದು ಆದರೆ ಓದುವಾಗ ನಮ್ಮಲ್ಲಿ ದೊರೆಯುವ ಅನುಭೂತಿ ನಮ್ಮನ್ನು ಸಹೃದಯರನ್ನಾಗಿ ಮಾಡಿಸುತ್ತದೆ. ಒಂದೊಂದು ಪಾತ್ರವು ಒಂದೊಂದು ಸಂಧರ್ಭದಲ್ಲಿ ಮಾಡಿಸುವ ರಸಾಸ್ವಾದವು ಬಣ್ಣನೆಗೆಟುಕದ್ದು. ಗಹನವಾದ ತತ್ತ್ವವೊಂದನ್ನು ಜನಸಾಮಾನ್ಯರಿಗೆ ಗ್ರಾಹ್ಯವಾಗುವಂತೆ ತೋರಿಸಿಕೊಟ್ಟಿರುವ ವಾಲ್ಮೀಕಿಗಳ ಕಥಾಶಕ್ತಿ ಸಾಮಾನ್ಯವೆಂಬಂತೆ ಪ್ರವಹಿಸಿದೆ. ಈ ಕಥಾನಕ ಸೃಷ್ಟಿಯಲ್ಲಿ ವಾಲ್ಮೀಕಿಗಳಂತೂ ಕಾವ್ಯೆತಿಹಾಸದ ಪ್ರಕಟಣೆ ಓತಪ್ರೋತವಾಗಿ ನಡೆಯುತ್ತದೆ. ಇನ್ನು ಕನ್ನಡಲ್ಲಿ ಇದನ್ನು ಅನುವಾದಾಮಾಡಿರುವ ರಂಗನಾಥಶರ್ಮರು ಇದನ್ನು ಒಂದು ಸ್ವತಂತ್ರಕೃತಿಯಂತೆ ನಿರೂಪಿಸಿದ್ದಾರೆ. 


ಪ್ರತಿಕಾಂಡದ ಕೆಲವು ಸ್ವಾರಸ್ಯ ವಿಶೇಷಗಳನ್ನು ವಿಶದವಾಗಿ  ತಿಳಿಯಬೇಕೆನಿಸದರು, ನನ್ನ ಕಾರ್ಯಬಾಹುಳ್ಯದಿಂದ ಇದನ್ನು ಸದ್ಯಕ್ಕೆ ಮಾಡಲಾಗುತ್ತಿಲ್ಲ ಇದನ್ನು ನಾನು ಮತ್ತೊಮ್ಮೆ ವಿವರವಾಗಿ ಶೀಘ್ರದಲ್ಲಿ ಬರೆಯುತ್ತೇನೆ. 




Thursday, November 28, 2019

ಮೈಸೂರಿನ ನಿಧಿ ಶ್ರೀತತ್ತ್ವನಿಧಿ


ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ. 




Tuesday, May 21, 2019

ಮಾಡೇಶ್ವರ ಎಂಬ ಊರಿನ ಕಥೆ



"ಈ ಊರಿನಲ್ಲಿರುವುದು ಎರಡು ಕುಟುಂಬದ ೪ ಮನೆಗಳು ಮಾತ್ರ, ಗ್ರಾಮ ಬೆಟ್ಟದ  ಬುಡದಲ್ಲಿ ಇರುವುದರಿಂದ ಪ್ರಾಣಿ, ಸರೀಸೃಪಗಳ ತೊಂದರೆ, ಸಾರ್ವಜನಿಕ ಸಾರಿಗೆಗೆ ಸುಮಾರು ೨-೩ ಕಿ.ಮೀ. ನಡೆಯಬೇಕಾಗಿರುವುದರಿಂದ ಸ್ವಂತ ವಾಹನ ಸೌಕರ್ಯವಿದ್ದವರು ಮಾತ್ರ ಇಲ್ಲಿಗೆ ಬರಬಹುದು, ಹತ್ತಿರದ ಅಂಗಡಿಯಂದರೆ ೩ ಕಿ.ಮೀ. ದೂರದ್ದು, ಮನೆಯಲ್ಲೇ ಮೊಬೈಲ್ ನೆಟವರ್ಕ್ ದೊರೆಯುವುದಿಲ್ಲವಾದಾರಿಂದ ಕೈಯಲ್ಲಿ ಮೊಬೈಲ್ ಹಿಡಿದು ನೆಟವರ್ಕ್ಗಾಗಿ  ಅಲೆಯ ಬೇಕಾದ  ಪರಿಸ್ಥಿತಿ , ವಿದ್ಯುತ್ ಸಂಪರ್ಕ ಕಡಿತಗೊಂಡರೆ ಒಮ್ಮೊಮ್ಮೆ ೪-೫ ದಿವಸಗಳವರೆಗೂ ಕತ್ತಲೆಯ ಆವಾಸ, ಮಳೆಗಾಲದಲ್ಲಿ ಪರಿಸ್ಥಿತಿಯನ್ನಂತೂ ಹೇಳತೀರದು ... " ಇವೆಲ್ಲವೂ ನಿಮಗೆ ಮಲೆನಾಡಿನ ಯಾವುದೋ ಊರಿನ ಚಿತ್ರಣವನ್ನು ನಿಮ್ಮ ಕಣ್ಣ ಮುಂದೆ ತಂದಿದ್ದರೆ ನಿಮ್ಮ ಊಹೆ ತಪ್ಪು, ಇದು ಬೆಂಗಳೂರಿನ ಸನಿಹದಲ್ಲೇ ಇರುವ ಮಾಡೇಶ್ವರ ಎಂಬ ಗ್ರಾಮದ ಪರಿಸ್ಥಿತಿ. 

ಬೆಂಗಳೂರಿನಿಂದ ಕೇವಲ ೬೦ ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿದೆ, ಇಲ್ಲಿ ವ್ಯಾಸರಾಜರು ಪ್ರತಿಷ್ಠಾಪಿಸಿದರು ಎನ್ನಲಾದ ಆಂಜನೇಯ, ಚೋಳರ ಕಾಲದ ಮುಕ್ಕಣ್ಣ, ಬಸವಣ್ಣ ದೇವಸ್ಥಾನ,  ಬೃಂದಾವನ ನರಸಿಂಹ, ಗ್ರಾಮ ದೇವತೆ ವೀರಮಾಸ್ತಮ್ಮ ದೇವಸ್ಥಾನಗಳಿವೆ.  ಶ್ರಾವಣ, ಮಾಘ ಮಾಸಗಳಲ್ಲಿ ಇಲ್ಲಿ ನಡೆಯುವ ವಿಶೇಷ ಭಜನೆಗೆ ೯೦ ವರುಷಕ್ಕೂ ಮಿಗಿಲಾದ ಇತಿಹಾಸವಿದೆ. ಕೆರೆ ಕಟ್ಟೆಗಳಿವೆ, ಸಿಹಿ ನೀರಿನ ಬಾವಿ ಇದೆ, ಕಚ್ಚಾ ರಸ್ತೆಯಿದೆ,ಪುರಾತನ ಕೋಟೆಗಳ ಅವಶೇಷವಿದೇ, ಆದರೆ ಇದೆಲ್ಲವೂ ಇದ್ದರು ಶತಮಾನಗಳಿಂದ ನೆಲೆಸಿದ್ದ ಊರನ್ನು ಗ್ರಾಮಸ್ಥರು ತೊರೆಯುತ್ತಿದ್ದಾರೆ ... ಹೀಗೇಕೆ ? ಎಂದೆನಿಸದರೆ ಇದೊಂದು ಸರ್ಕಾರಿ ಪ್ರಾಯೋಜಿತ ವಲಸೆ ಎನ್ನುತ್ತಾರೆ ಗ್ರಾಮಸ್ಥರು.
ಹತ್ತು ಹದಿನೈದು ವರುಷಗಳ ಕೆಳಗೆ ಈ ಊರಿನಲ್ಲಿ ಸುಮಾರು ೩೦-೩೫ ಮನೆಗಳಿದ್ದವು, ಕೃಷಿಯನ್ನೇ ಅವಲಂಬಿಸಿದ್ದ ಕುಟುಂಬಗಳು ಮನೆಗಳು ಸದಾ ಜನರಿಂದ ಚಟುವಟಿಕೆಗಳಿಂದಿದ್ದವು, ಹೊಲ ಗದ್ದೆ, ಕಣ, ಪಶುಸಂಗೋಪನೆಗಳಿಂದ ಊರು ಸದಾ ಗಿಜಿಗುಡುತ್ತಿದ್ದವು. ಕೆರೆ, ಕಟ್ಟೆ, ಬಾವಿಗಳ ಬಳಿ, ಹೂವಿನ ಗಿಡಗಳ ಬಳಿ ಹೆಣ್ಣು ಮಕ್ಕಳ ಸಾಂಸಾರಿಕ ಕಥೆಗಳು ಕೇಳಿಬರುತ್ತಿದ್ದವು, ಬೆಟ್ಟದಲ್ಲಿ ಕುರಿ , ಮೇಕೆ ಹಸುಗಳನ್ನು ಮೇಯಿಸಲು ಒಗ್ಗಟ್ಟಾಗಿ ಹೋಗುವ ಹತ್ತು ಹಲವು ಜನರಿದ್ದರು. ವ್ಯಾಪಾರ ವ್ಯವಹಾರಗಳಿಗೆ ಹಲವು ಜನರ ಓಡಾಟವಿತ್ತು,  ಪೂಜೆ ಹಬ್ಬ ಉತ್ಸವಗಳ ಆಡಂಬರಗಳಿದ್ದವು. ಸಾಮಾನ್ಯ ಹಳ್ಳಿಗಳಂತೆ ಜನರ ಒಡನಾಟ ಒಗ್ಗಟ್ಟಿನಿಂದ ಊರು ಒಂದು ರೀತಿ ಕಂಗೊಳುಸಿತ್ತಿತ್ತು. 


ಆದರೆ, ಆಧುನಿಕತೆಗೆ ತೆರೆದುಕೊಳ್ಳುತ್ತಲೇ  ಗ್ರಾಮಸ್ಥರಿಗೆ ಒಂದು ಕೃತಕ ಕೊರತೆ ಇದ್ದಕ್ಕಿದ್ದಹಾಗೆ ಆವರಿಸಿತು. ಬೆಟ್ಟದ ಬುಡದಲ್ಲೆ ಕಳೆಯುತ್ತಿರುವ ತಮ್ಮ ಜೀವನವನ್ನು ತುಚ್ಛವಾಗಿ ತಮಗೆ ತಾವೇ ಕಂಡುಕೊಂಡರು. ಬೆಟ್ಟದ ಬುಡದಲ್ಲೇ ಇದ್ದರೆ ತಮ್ಮ ಮಕ್ಕಳನ್ನು ಮದುವೆಯಾಗಲು ಯಾರು ಮುಂದೆಬರುವುದಿಲ್ಲ ಎಂದೆನಿಸಿತು. ರಸ್ತೆಯಿಂದ ಬಹಳ ಒಳಗೆ ಈ ಊರು ಇರುವುದರಿಂದ ಕಚ್ಚಾ ರಸ್ತೆಯುಳ್ಳ  ತಮ್ಮ ಊರಿಗೆ ಯಾರು ಬರಲೊಲ್ಲರು ಎಂದುಕೊಂಡರು. ಈ ನಡುವೆ ಯಾರೋ ಒಬ್ಬರು ಸರ್ಕಾರಕ್ಕೆ ಅರ್ಜಿ ಬರೆದಿದ್ದರಿಂದ ಊರಿನಿಂದ ಸುಮಾರು ೧.೫ ಕಿ.ಮೀ ದೂರದಲ್ಲಿ ರಸ್ತೆ ಪಕ್ಕದ  ಸರ್ಕಾರಿ ಜಮೀನು  ವಸತಿಗಾಗಿ ಪರಿವರ್ತನೆ ಹೊಂದಿತು, ಮನೆ ಕಟ್ಟಲು ಸರ್ಕಾರವೇ  ಹಣ ಮಂಜೂರು ಮಾಡಿತು  ಹೀಗೆ ಸರ್ಕಾರವೇ ಈ ವಲಸೆಯನ್ನು ಪ್ರಾಯೋಜಿಸಿದ್ದರಿಂದ ಒಬ್ಬೊಬ್ಬರೇ ಊರನ್ನು ಬಿಡಲು ಶುರು ಮಾಡಿದರು. ಅಕಾರಣವಾಗಿ ಮೂಲ ಮಾಡೇಶ್ವರ  ತನ್ನ ಛಾಪನ್ನು ಕಳೆದುಕೊಂಡಿತು, ಕ್ರಮೇಣ ಮೂಲ ಮಾಡೇಶ್ವರ ಹಿಂದುಳಿದು ದೂರದಲ್ಲೆಲೋ ಹೊಸ ಗ್ರಾಮ ನೆಲೆಯೂರಿತು. 


ಬೆಟ್ಟದ ಬುಡದಲ್ಲಿನ ಗ್ರಾಮದಲ್ಲಿ ಯಾವುದೇ "ಆಧುನಿಕ" ಮೂಲಭೂತ ಸೌಲಭ್ಯ ಕೆಲಸಗಳು ಮುಂದುವರೆಯದ್ದಿದರಿಂದ, ಇಡೀ ಗ್ರಾಮದಲ್ಲಿ ಈಗ ಕೇವಲ ೨ ಮನೆಯ ೮-೧೦ ಜನ ಮಾತ್ರ ನೆಲಿಸಿದ್ದಾರೆ. ಕೃಷಿ ಚಟುವಟಿಕೆ ಮಾಡುವ ಜನರೇ ಕಾಣೆಯಾಗಿದ್ದಾರೆ,  ಕಚ್ಚಾ ರಸ್ತೆ ೧೦ ವರುಷದ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ , ನಿರಂತರ ಜ್ಯೋತಿಯ ಕಂಬಗಳು ಊರಿಗೆ ಬೆಳಕು ತಂದಿಲ್ಲ, ನೀರಿನ ಕೊಳಾಯಿಗಳಿದ್ದರು ಯಾರು ನಿಗಾವಹಿಸುವರಿಲ್ಲ, ಅಂಗನವಾಡಿ, ಹಾಲಿನ ಡೈರಿ ಎಂದೋ ವಲಸೆ ಹೋಗಿಯಾಗಿದೆ, ಬೆರೆಳಿಣಿಕೆಯ ಜನರಿರುವ ಕಾರಣ ಗ್ರಾಮಕ್ಕೆ ಜನಪ್ರತಿನಿದಿಗಳು ಬರುವ ಗೋಜಿಗೆ ಹೋಗಿಲ್ಲ. 


















ಹೀಗೆ ಕೇವಲ ೧೦-೧೫ ವರುಷಗಳಿಂದ ಈಚೆ ಇಡೀ ಗ್ರಾಮವೇ ಖಾಲಿಯಾಗಿದೆ. ಇರುವ ೨ ಕುಟುಂಬಗಳು  ಹಲವು ಕೊರತೆಗಳ ನಡುವೆಯೂ ಬದುಕನ್ನು ಸಾಗಿಸುತ್ತಿದ್ದಾರೆ.  ಇಲ್ಲಿನ ಬೆಟ್ಟದ, ದೇವಸ್ಥಾನಗಳ ಜೊತೆಗಿರುವ ತಮ್ಮ ಅವಿನಾಭಾವ ಸಂಬಂಧವನ್ನು ತೊರೆಯಲಾರದೆ, ಹೊಸ ಗ್ರಾಮಕ್ಕೆ ವಲಸೆ ಹೋಗಲಾರದೆ ಡೋಲಾಯಮಾನ ಸ್ಥಿತಿಯ್ಲಲಿ ದಿಕ್ಕುತೋಚದಂತಾಗಿದ್ದರೆ. "ಅಭಿವೃದ್ಧಿಯ ಸಂಕೇತವೆನಿಸಿರುವ" ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೩೫ ಕಿ.ಮೀ ದೂರದಲ್ಲಿದ್ದರು,  ಇಲ್ಲಿನ ಜನರ ಬವಣೆ ಆಧುನಿಕ ಜಗತ್ತನ್ನು ನಾಚಿಸುವಂತಿದೆ. 

Friday, August 18, 2017

IT ಹುಡುಗನ halfತ್ಮಾ ಕಥೆ


ಇದೇನಪ್ಪ ಟೈಟ್ಲು ಹೀಗೆ ಅಂತ ತಲೆಕೆಡಿಸ್ಕೊಬೇಡಿ, IT fieldಲ್ಲಿ ಇದೆ ತರ ನಾವು ಎಲ್ಲಕ್ಕೂ ತಲೆಕೆಡಿಸಿಕೊಳ್ಳುತ್ತೇವೆ ಕೆಡೆಸಿಕೊಂಡರೆ !? ಎನ್ನುತ್ತೀರೇನು ? ಕೆಡೆಸಿಕೊಂಡರೆ ಕೆಡೆಸಿಕೊಳ್ಳಿ  ಏನು ಗೊತ್ತಾಗುವುದಿಲ್ಲ. 
ಇನ್ನು ಒಂದು ನಿವೇದನೆ ಅಲ್ಲ ಠರಾವು, ಈ ಅನಾಹುತ ಕಥೆ sorry ಆತ್ಮ ಕಥೆಯಲ್ಲಿ ವ್ಯಕ್ರಾಣ ಗೀಕ್ರಣ ಎಲ್ಲ ತಲೆಕೆಡಿಸ್ಕೊಬ್ಯಾಡಿ, ಯಾಕೆಂದ್ರೆ ಇದು SMS whats App ಕಾಲ. ವ್ಯಕ್ರಾಣ ಅಂದ್ರೆ ಗೋಕರ್ಣಕ್ಕೆ ಹೋಗಿ ಸಂಕ್ರಣ್ಣನ್ನ  ಮನೇಲಿ ಸೀಕರ್ಣೆ ತಿನ್ನೋ ಅಷ್ಟು ಸುಲ್ಬ ಅಲ್ಲ. ಸುಮ್ನೆ ಓದ್ಕೊಳಿ. 

ಇನ್ನು ಕಥೆ "ಅಂದಾನೊಂದು ಕಾಲದಲ್ಲಿ ನಾನು IT ಕಂಪನಿಲಿ ಕೆಲ್ಸಕ್ಕೆ ಸೇರಿದೆ, ಯಾಕೆ ಸೇರಿದೆ ?  ನಾನು ಇಂಜಿನಿಯರಿಂಗ್ ಓದಿದ್ದೆ ಅದ್ಕೆ ಸೇರ್ದೆ. ಇಂಜಿನಿಯರಿಂಗ್ ಯಾಕೆ ಓದಿದೆ ಸೇರ್ಸುದ್ರು ಸೇರ್ಕೊಂಡೆ...ಯಾರು ?? ತಂದೆ ತಾಯಿ ... ಹಾ.. ಇಲ್ಲಿಂದಲೇ ಕಥೆ ಶುರು..."

ನನ್ನ ಇಂದಿನ ಪರಿಸ್ಥಿತಿಯ ಕಾರಣ ಶುರುವಾಗುವುದೇ ಇಲ್ಲಿಂದ..ನಾನು ಸಣ್ಣವನಿದ್ದಾಗ ದಡ್ಡ ಮಾಸ್ತರ ಬಳಿ ಬುದ್ದಿವಂತ ಎನಿಸಿಕೊಂಡಿದ್ದೆ, ಇದೆ ನೋಡಿ ನನ್ನ ಸುದೈವ, ದುರ್ದೈವ, ವಿಧಿ, ದುರ್ವಿಧಿ.. ಯಾಕೆಷ್ಟು ಪದ ಎಂದಿರಾ ಇನ್ಯಾರನ್ನು ತಾನೇ ಹಳಿಯಲಿ ನಾನು. ಚೆನ್ನಾಗಿ ಮಾರ್ಕ್ಸು ತೆಗೆಯುವ ಚಟ ಆಗಾತಾನೆ ಶುರುವಾಗಿತ್ತು ಇದನ್ನು ತಂದೆ ತಾಯಿಯರೊಡನೆ ಇಡೀ ಸಮಾಜವೇ ಪೋಷಿಸಿತು. ಮಾರ್ಕ್ಸ್ ಕಾರ್ಡು ನಮ್ಮ ಜೀವ ನಿಯಂತ್ರಕವಾಯ್ತು, ಸಾಮಾಜಿಕ status ಆಯಿತು ನಮ್ಮನ್ನಳೆಯುವ ಅಳತೆಗೋಲೂ ಆಯಿತು. ಇನ್ನು ಮಾರ್ಕ್ಸ್ ಕಾರ್ಡ್ ಶಾಲೆ ಇಂದ ಇಡಿದು, ಇಂಜಿನಿಯರಿಂಗ್ ತನಕ ಗಳಿಸಿದೆ. ನನ್ನ ಈ ಮಾರ್ಕ್ಸ್ ಮಹಾಪರಾಧಕ್ಕಾಗಿ ಅಲ್ಲ ದುಷ್ಪರಿಣಾಮವಾಗಿ ನನಗು ಕೆಲಸ ಸಿಕ್ಕಿತು. ಎಲ್ಲಿ ಅಲ್ಲಿ  "ಎಂ.ಏನ್. ಸೀ.." ಅಲ್ಲಿಂದ  ದಡ್ಡನಂತೆ ಒಂದು IT ಪ್ರಾಣಿಯಾದೆ. 

ಆಫೀಸ್ನಲ್ಲಿ ಆಫೀಸ್ ಪ್ರಾಣಿ, ಮನೇಲಿ ಗಂಡ ಪ್ರಾಣಿ, ಅಣ್ಣ ಪ್ರಾಣಿ, ಮಗ ಪ್ರಾಣಿ, ಬಸ್ಸಿನಲ್ಲಿ ಪ್ಯಾಸೆಂಜರ್ ಪ್ರಾಣಿ, Qಗಳಲ್ಲಿ Q ಪ್ರಾಣಿ.... ಇದು ನನ್ನ ಪ್ರಸ್ತಾವನೆ. ಒಟ್ಟಿನಲ್ಲಿ ನಾನೊಬ್ಬ ನರಪ್ರಾಣಿ ಎಂದು ಯಾರಿಗೂ ಅನ್ನಿಸಿಲ್ಲ. 
ಆಫೀಸ್ನಲ್ಲಿ ನನಗೆ ಬಹಳ ಸಿಟ್ಟು, ಆಗ ಏನು ಮಾಡುತ್ತೇನೆಂದರೆ.... ಅದನ್ನು ಮನೆಗೆ ತರುತ್ತೇನೆ... ಮನೆಯಲ್ಲೂ ನನ್ನ ಸಿಟ್ಟು ನೆತ್ತಿಗೇರಿತಂದರೆ .. ಏರಿದರೆ...  ಯಾರು ಕ್ಯಾರೇ ಅನ್ನುವರಿಲ್ಲ  ?  ಇದಕ್ಕೆಲ್ಲ ಒಂದು ಪರಿಹಾರ ಹುಡುಕಿಕೊಂಡಿದ್ದೇನೆ ಅದೇನೆಂದರೆ ಸಿಟ್ಟನ್ನು ನುಂಗಿಕೊಳ್ಳುವುದು !
ಹೌದು ನುಂಗಿಕೊಳ್ಳುವುದು , ಇದನ್ನು ಬಹಳದಿಸಗಳಿಂದ ಅಭ್ಯಾಸ ಮಾಡಿದ್ದೇನೆ, ಈ ಸಿಟ್ಟೇ ಎಷ್ಟೋ ಬಾರಿ ನನ್ನ ಹೊಟ್ಟೆಗೆ ಹಿಟ್ಟಾಗುತ್ತದೆ ಕೆಲವು ಬಾರಿ ಕಣ್ಣೀರು ಜೊತೆಗೆ ಸೇರಿ ಬೇಗನೆ ಪಚನವಾಗುತ್ತದೆ ಸಿಟ್ಟು. 

ಈಗ ಅರ್ಧದಾರಿ ಕ್ರಮಿಸಿಯಾಗಿದೆ, ಏನು ಮಾಡುವುದೆಂದು ಗೊತ್ತಿಲ್ಲ ಗೊತ್ತಾದಾಗ ಇನ್ನು halfತ್ಮಾ ಹೊರಗೆಬರುತ್ತಾನೆ. 

ಅಲ್ಲಿಯವರೆಗೂ ಸ್ವಲ್ಪ whatsapp, facebookಗಳನ್ನೂ ಚೆಕ್ ಮಾಡ್ತಿರಿ. 

Friday, March 17, 2017




 

ಮಾರ್ಚ್ ೧೭ ಕನ್ನಡ ಸಾಹಿತ್ಯದ ದಿಗ್ಗಜರಾದ ಡಿ.ವಿ.ಜಿ. ಹಾಗು ಪು. ತಿ. ನ ರವರ ಜನ್ಮದಿನ.
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ ರಂದು ಜನಿಸಿದರು, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಜನಿಸಿದ್ದು ಮಾರ್ಚ್ 17 ೧೮೮೭ ಮುಳಬಾಗಿಲಿನಲ್ಲಿ. ಆಧ್ಯಾತ್ಮ, ಲೋಕ ನೀತಿ, ಪ್ರಕೃತಿ, ದೈವತ್ವ ಒಳಗೊಂಡಂತಹ ಸಮಾಹಿತದ ಸಾಹಿತ್ಯ ಈರ್ವರ ಸಾಹಿತ್ಯದ ಪ್ರಧಾನ ಅಂಗ. 

ಪದ್ಮ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಇಬ್ಬರೂ ಬರೆದಂತೆ ಬದುಕಿ ಬದುಕಿದಂತೆ ಬರೆದವರು.

ಪು.ತಿ.ನ ರವರು "ಕರ್ಮಯೋಗಿ ಡಿ.ವಿ.ಜಿ." ಎಂದು ಡಿವಿಜಿಯವರನ್ನು ಸ್ಮರಿಸಿರುವ ಪದ್ಯ.

"ಆತ್ಮದಿಂದಾತ್ಮವನು ಮೇಲಕೆತ್ತಲು ಬೇಕು
ಆತ್ಮವನು ಕೆಳಗೊತ್ತಿ ಇಡಲಾಗದು 
ಆತ್ಮವೇ ಆತ್ಮಕ್ಕೆ ನಂಟನಂತೊದಗುವುದು
ಆತ್ಮವೇ ಆತ್ಮಕ್ಕೆ ಹಗೆಯಪ್ಪುದು 

"ಯಾರು ತನ್ನನು ತಾನು ಗೆಲ್ಲುವನೋ ಆತನಿಗೆ 
ತೀರಾ ಹತ್ತಿರದ ಬಂಧುವಪ್ಪುದಾತ್ಮ 
ಯಾರು ತನ್ನೊಳಗಾತ್ಮನಿಲ್ಲದೊಲು ಬಾಳುವನೊ 
ವೈರಿಯಾತನಿಗಾತ್ಮ ತಾನಪ್ಪುದು -"

ಅಂದು ಗೀತಾಚಾರ್ಯರಿಂತೊರೆದ ಸೂಕ್ತಿಯನು 
ಇಂದು ಬಾಳೊಳು ತಂದ ಧೀರಾತ್ಮನಿವನು 
ತನ್ನಿಂದ ತಾನಿದ್ದು ತನ್ನ ಗೆದ್ದವನೀತ 
ಉನ್ನತರೋಳುನ್ನುತವನು ಪ್ರೇಮ ನಿಷ್ಠಪ್ತ 
ದೈವವನು ನಂಬಿಯೂ ಪುರುಷಪ್ರಯತ್ನವನು 
ಸೇವೆ ಎಂದೆಣಿಸಿದವ ಸತ್ಕರ್ಮಾಸಕ್ತ 

ನಕ್ಕು ನಲಿಸುವ ಸರಸಿ ಬಿಕ್ಕಿ ಮರುಗುವ ಕರುಣಿ 
ಸೊಕ್ಕಿದವರನು ತಾನು ಧಿಕ್ಕರಿಪ ಧೃತಿಮಾನ್ 
ದುಕ್ಕ ಸೊಗಗಳು ದೈವವಿಕ್ಕುವ ಹಸಾದವೆನೆ 
ದಿಕ್ಕುಗೆಡದಂದದಲಿ ತಾಳಿದ ಸಹಿಷ್ಣು 

ಕಣ್ಣೀತ ಕಿರಿಯರಿಗೆ ಹಣ್ಣು ತಾತ್ವಿಕ ಜನಕ್ಕೆ 
ತಿಣ್ಗ ಬುದ್ದಿಯ ಕುಶಲ ಹೃದಯಜೀವಿ 
ಮಣ್ಣುವಿಣ್ ಒಟ್ಟಾಗಿ ಸೃಜಿಸೀತೆ ಡಿವಿಜಿಯ 
ಕನ್ನಡವು ಸಾರಮತಿಯೀತನಿಂದೆಂಬೆ 

ನಾಡು ನುಡಿ ರೂಢಿಗಳ ತ್ರೈಮೌಲ್ಯಕಳವಡಿಸಿ 
ಹೊಸ ನೋಟ ತಂದನೀತ 
ಹಾಡು ನುತಿನತಿಗಳಿಂದರ್ಚಿಸುವುದಚ್ಚರಿಯೆ 
ಈತನಂ ಪ್ರೀತ ಜನ ಜಾತ 


Thursday, March 16, 2017

                                                                 

                                                                  ಚಿತ್ರದ ಪರಿಚಯ

ಸಾಮಾನ್ಯವಾಗಿ ಈ ಚಿತ್ರವನ್ನು ಕನ್ನಡ ಸಾಹಿತ್ಯರಸಿಕರೆಲ್ಲ ಕಂಡಿಹರು, ಇದು "ಆಲ್ ಇಂಡಿಯಾ ರೇಡಿಯೋ" ಮೈಸೂರ್ ಕೇಂದ್ರದ ಅಧಿಕಾರಿಗಳು ತಾ|| ೧೫-೮-೧೯೫೪ರ ಸಂಜೆ ಸ್ವಾತಂತ್ರ್ಯೋತ್ಸವದ ಅಂಗವಾಗಿ "ನವ್ಯ ಸಾಹಿತ್ಯ ನಿರ್ಮಾಣ" ಎಂಬ ಭಾಷಣಮಾಲೆಯನ್ನು ಏರ್ಪಡಿಸಿದ್ದರು.

ಈ ಭಾಷಣಮಾಲೆಯಲ್ಲಿ ಭಾಗವಹಿಸಿದ್ದವರು : ಸರ್ವಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಕುವೆಂಪು, ವಿ.ಸೀತಾರಾಮಯ್ಯ,  ಶಿವರಾಮ ಕಾರಂತ, ಅ. ನ. ಕೃಷ್ಣರಾಯರು ಮತ್ತು ಜೆ. ಪಿ. ರಾಜರತ್ನಂ.

ಇದರಲ್ಲಿ 'ರಾಷ್ಟ್ರಸ್ವಾತಂತ್ರ್ಯ ಮತ್ತು ಕಾವ್ಯಸ್ಪೂರ್ತಿ'ಯನ್ನು ಡಿ.ವಿ.ಜಿ. , 'ಹೊಸ ಸಾಹಿತ್ಯ ರೂಪಗಳು' ಕುರಿತು ಕಾರಂತ, 'ಸಾಹಿತ್ಯ ಮತ್ತು ವಾಸ್ತವಿಕತೆ'ಯನ್ನು ಅ.ನ.ಕೃ, 'ನವ್ಯಸಾಹಿತ್ಯದಲ್ಲಿ ನೀರೋಗ ವಿಮರ್ಶೆ'ಯಾ ಬಗ್ಗೆ ಮಾಸ್ತಿ, 'ಸಾಹಿತ್ಯ ಮತ್ತು ಲೋಕಶಾಂತಿ'ಯನ್ನು ವಿ.ಸೀ, 'ಮುಂದಿನ ಸಾಹಿತ್ಯದಲ್ಲಿ ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ'ಯನ್ನು ಕುರಿತು ಕುವೆಂಪು ಮಾತನಾಡಿದರು. ರಾಜರತ್ನಂ ಈ  ನಿರ್ದೇಶಕರಾಗಿದ್ದರು.

ಮೈಸೂರಿನ  ಕಾವ್ಯಾಲಯ ಪ್ರಕಾಶಕರು ಈ ಭಾಷಣಗಳನ್ನು "ನವ್ಯ ಸಾಹಿತ್ಯ ನಿರ್ಮಾಣ' ಎಂಬ ಹೆಸರಿನಿಂದ ಪ್ರಕಟಿಸಿದ್ದರು.


Monday, October 8, 2012

ಸ್ತಪತಿ ಮತ್ತು ಶಾಂತ ಬುದ್ದನ ವಿಗ್ರಹ

ಈ ಕತೆ ಎಲ್ಲೋ ಓದಿದ್ದು ಅಲ್ಲ ಯಾರು ಬರೆದದ್ದು ಅಲ್ಲ..ಹೀಗೆ ಆಲೋಚನೆಯಲ್ಲಿದ್ದಾಗ ಬಂದದ್ದು. ಇದರ ಚಿತ್ರಣ ಸುಮಾರು 600-800 ವರ್ಷಗಳೆಂದುಕೊಳ್ಳಬಹುದು.

ಒಂದು ಊರಿನಲ್ಲಿ ಒಬ್ಬ ಬಹಳ ಒಳ್ಳೆಯ ಸ್ತಪತಿಯೋಬ್ಬನಿದನು, ಅವನ ಕೆತ್ತನೆಯ ಕೆಲಸ ಬಹಳ ಸುಪ್ರಸಿದ್ದವಗಿದ್ದು ಅವನಿಗೆ ಬಹಳ ಬೇಡಿಕೆಯು ಇತ್ತು. ಹಾಗಾಗಿ ರಾಜನೊಬ್ಬನ ಆಜ್ಞೆಯಂತೆ ಒಂದು ಬುದ್ದನ ವಿಹಾರ ಕಟ್ಟುವ ಅವಕಾಶ ಇವನಿಗೆ ಒದಗಿ ಬಂತು. ಇವನಿಗೆ ರಾಜನು ಎಲ್ಲ ರೀತಿಯ ಸಹಾಯ ಸಲಕರಣೆಗಳನ್ನು ಒದಗಿಸಿ ಈ ಮಾದರಿಯ ವಿಹಾರ ಎಲ್ಲೂ ಇರಬಾರದು ಆ ರೀತಿಯಲ್ಲಿ ಕಟ್ಟಬೇಕೆಂದು ಹೇಳಿದನು. ಅಂತೆಯೇ ಸ್ತಪತಿಯು ಬಹಳ ಚಾಕಚಕ್ಯತೆಯಿಂದ ವಿಹಾರವನ್ನು ಕಟ್ಟತೊಡಗಿದನು.
ಈ ನಡುವೆ ಸಂಸಾರದಲ್ಲಿ ಏನೋ ವಿಪರೀತವಾಗಿ ತನ್ನ ತಾಯಿಯನ್ನು ಮತ್ತು ಕುಟುಂಬದವರನ್ನು ದೂಷಿಸಿ ಸ್ತಪತಿಯು ಮನೆಯಿಂದ ಹೊರನಡೆದನು.

ಇತ್ತ ವಿಹಾರದ ಎಲ್ಲ ಕೆಲಸಗಳು ಮುಗಿದು ಪ್ರಾಂಗಣದ ಬುದ್ದನ ಮೂರ್ತಿಯ ಕೆತ್ತನೆ ಕಾರ್ಯ ನಡೆಯತೊಡಗಿತು, ಸ್ತಪತಿಯು ಈ ಕಾರ್ಯವನ್ನು ಕೈಗೆತ್ತಿಕೊಂಡು ಎಷ್ಟೇ ತದೇಕಚಿತ್ತದಿಂದ ಮಾಡಿದರು ಬುದ್ದನ ಆ ಮಂದಸ್ಮಿತ ನಗೆಯನ್ನು ಮೂಡಿಸುವಲ್ಲಿ ವಿಫಲನಾಗುತ್ತಿದ್ದ. ಈ ವಿಷಯ ರಾಜನಿಗೂ ತಿಳಿದು ಸ್ತಪತಿಯ ಈ ವರ್ತನೆಯನ್ನು ಬೇಸರದಿಂದ ಮಂತ್ರಿಯಲ್ಲಿ ದೂರಿ  ಇದರ ಗಮನ ಹರಿಸುವಂತೆ ಹೇಳಿದ. ಸ್ತಪತಿಯ ಕಾರ್ಯವೈಖರಿಯನ್ನು ಹಿಂದೆ ಗಮನಿಸಿದ್ದ ಮಂತ್ರಿಯು ಈಗಿನ ಅವನ ಸ್ತಿತಿಯನ್ನು ಇತರರಿಂದ ಅವನ ಕೊರತೆಯನ್ನು ಕಂಡುಕೊಂಡನು.

ಒಮ್ಮೆ ಮಂತ್ರಿಯು ಅವನ ಬಳಿ ಬಂದು "ನೀನು ಬುದ್ದನ ವಿಗ್ರಹದಲ್ಲಿ ಮಂದಸ್ಮಿತ ಮೂಡಿಸಲು ಬಹಳವಾಗಿ ಶ್ರಮಿಸುತ್ತಿದ್ದೆಯಾ, ಆದರೆ ಆ ಮಂದಸ್ಮಿತ ನಿನ್ನಲ್ಲೇ ಇಲ್ಲ, ಆ ಮಂದಸ್ಮಿತ ನಿನ್ನಲ್ಲಿ ಮೂಡದಹೊರತು ಆ ಬುದ್ದನಲ್ಲಿ ಮೂಡುವುದಿಲ್ಲ ಎಂದನು."
ಈ ಮಾತು ಕೇಳಿದೊಡನೆಯೇ ಸ್ತಪತಿಯ ಕಣ್ಣುಗಳು ತೆರೆದಂತಾದವು, ಕೂಡಲೇ ಎದ್ದು ಮಂತ್ರಿಗೆ ತನ್ನ ಮನಸ್ತಿತಿಯನ್ನು ವಿವರಿಸಿ ಹೇಳಿದನು. ಇದ ಕೇಳಿದ ಮಂತ್ರಿಯು ಅವನನ್ನು ಕೂಡಲೇ ತನ್ನ ತಾಯಿ  ಹಾಗು ಕುಟುಂಬದವರನ್ನು ಭೇಟಿಮಾಡಿ ಬರಲು ಹೇಳಿದನು.ಕೆಲವು ದಿನಗಳ ತರುವಾಯ ಮರಳಿದ ಸ್ತಪತಿಯು ತನ್ನ ಸಂತೋಷವನ್ನು ಮಂತ್ರಿ ಹಾಗು ಇತರರೊಡನೆ ಹಂಚಿಕೊಂಡು ಉಲ್ಲಾಸದಿಂದಿದ್ದನು.

ಕೆಲವು ದಿವಸಗಳ ಪರಿಶ್ರಮದ ನಂತರ ಮಂದಸ್ಮಿತ ಶಾಂತ ಬುದ್ದನ ಮೂರ್ತಿಯು ರೂಪುತಳೆಯಿತು.